ಕ್ಯಾಲಮೈಟಿಸ್ 

ಸ್ಪೀನಾಪ್ಸಿಡ ಎಂಬ ವರ್ಗದ ಕ್ಯಾಲಮೈಟೇಸೀ ಗುಂಪಿಗೆ ಸೇರಿದ ಒಂದು ಸಸ್ಯ. ಕಾರ್ಬಾನಿಫೆರಸ್ ಅವಧಿಯಲ್ಲಿ ಜೀವಂತವಾಗಿತ್ತು. ಇಂದು ಈ ಗುಂಪಿನ ಪ್ರತಿನಿಧಿಯಾಗಿ ಈಕ್ವಿಸಿಟಮ್ (ನೋಡಿ- ಕುದುರೆಬಾಲದ-ಗಿಡ) ಮಾತ್ರ ಉಳಿದಿದೆ. ಕ್ಯಾಲಮೈಟಿಸ್ ಸಸ್ಯದ ಅವಶೇಷಗಳು ಪ್ರಪಂಚದ ಉತ್ತರಾರ್ಧಗೋಳದಲ್ಲಿ ಮಾತ್ರ ಪತ್ತೆಯಾಗಿವೆ. ಪ್ರಾರಂಭದಲ್ಲಿ ಈ ಸಸ್ಯದ ಕಾಂಡ, ಬೇರು ಮತ್ತು ಸಂತಾನಾಭಿವೃದ್ಧಿಯ ಅಂಗವಾದ ಶಂಕÀುಗಳು (ಕೋನ್) ಬೇರೆ ಬೇರೆಯಾಗಿ ಸಿಕ್ಕಿದ್ದು ಇವೆಲ್ಲ ಭಿನ್ನ ಸಸ್ಯಜಾತಿಗಳಿಗೆ ಸೇರಿದವೆಂದು ಭಾವಿಸಲಾಗಿತ್ತು. ಅಂತೆಯೇ ಇವಕ್ಕೆ ಬೇರೆ ಬೇರೆ ಹೆಸರುಗಳನ್ನು ಕೊಡಲಾಗಿತ್ತು. ಈಗಲೂ ಆಯಾ ಹೆಸರುಗಳೇ ರೂಢಿಯಲ್ಲಿದ್ದರೂ ಇವೆಲ್ಲವೂ ಕ್ಯಾಲಮೈಟಿಸ್ ಸಸ್ಯದ ವಿವಿಧ ಭಾಗಗಳಿಗೆ ಅನ್ವಯಿಸುತ್ತವೆ ಎಂಬುದು ಸರ್ವವಿದಿತವಾಗಿದೆ. ಕ್ಯಾಲಮೈಟಿಸ್ ಸುಮಾರು 6-7 ಮೀ. ಎತ್ತರಕ್ಕೆ ಬೆಳೆಯುತ್ತಿದ್ದ ಮರ. ಇಂದಿನ ಕಾಲದ ಈಕ್ವಿಸಿಟಮ್ ಸಸ್ಯದಲ್ಲಿರುವಂತೆಯೇ ಕ್ಯಾಲಮೈಟಿಸಿನ ಸಸ್ಯದೇಹ ಭೂಮಿಯೊಳಗಿನ ಪ್ರಕಂಡಭಾಗವಾಗಿಯೂ ಇದರಿಂದ ಭೂಮಿಯ ಮೇಲೆ ಬೆಳೆಯುತ್ತಿದ್ದ ಕಾಂಡಭಾಗವಾಗಿಯೂ ವಿಭಾಗವಾಗಿತ್ತು ಪ್ರಕಂದದ ಮೇಲೆ ಗೆಣ್ಣುಗಳಿದ್ದು ಅವುಗಳಿಂದ ಆಗಂತುಕ (ಅಡ್ವಂಟಿಷಸ್) ಬೇರುಗಳು ಹೊರಡುತ್ತಿದ್ದುವು. ಪ್ರಕಂದ ಅನುಷಂಗಿಕ ಬೆಳೆವಣಿಗೆಯನ್ನು ಪ್ರದರ್ಶಿಸುತ್ತಿತ್ತು. ಕಾಂಡದ ಬೆಳೆವಣಿಗೆಯ ರೀತಿಯ ಆಧಾರದ ಮೇಲೆ ಸಸ್ಯವನ್ನು ಸ್ಟೈಲೊಕ್ಯಾಲ ಮೈಟಿಸ್, ಕ್ಯಾಲಮೈಟಿಸ್ ಮತ್ತು ಯೂಕ್ಯಾಲಮೈಟಿಸ್ ಎಂದು ಮೂರು ಉಪಜಾತಿಗಳಾಗಿ ವಿಂಗಡಿಸಲಾಗಿದೆ. ಭೂಮಿಯ ಮೇಲಕ್ಕೆ ಬೆಳೆಯುವ ಕಾಂಡದ ಮೇಲೆಲ್ಲ ಗೆಣ್ಣುಗಳನ್ನೂ ಅವುಗಳಿಂದ ಹೊರಡುವ ಅನೇಕ ಕಿರುರೆಂಬೆಗಳನ್ನೂ ಗುರುತಿಸಬಹುದು. ಅಲ್ಲದೆ ಕಾಂಡದ ಮೇಲೆ ಉದ್ದುದ್ದನೆಯ ಸಮಾಂತರವಾದ ಏಣುಗಳೂ ಇದ್ದುವು. ಒಂದು ಅಂತರ ಗೆಣ್ಣಿನ ಏಣುಗಳು ಮೇಲಿನ ಮತ್ತು ಕೆಳಗಿನ ಅಂತರ ಗೆಣ್ಣುಗಳ ಏಣುಗಳಿಗೆ ಪರ್ಯಾಯವಾಗಿದ್ದುವು. ತುಂಬ ಚಿಕ್ಕರೆಂಬೆಗಳ ಗೆಣ್ಣುಗಳಿಂದ ಹಲವಾರು ಎಲೆಗಳು ಹುಟ್ಟಿಕೊಳ್ಳುತ್ತಿದ್ದುವು. ಕ್ಯಾಲಮೈಟಿಸಿನ ಕಾಂಡದ ಒಳರಚನೆ ಈಗಿನ ಕಾಲದ ಈಕ್ವಿಟಿಸಮ್ ಸಸ್ಯದ ಕಾಂಡದ ಒಳgಚನೆಯನ್ನು ಹೋಲುತ್ತದೆ.ಕಾಂಡದ ಅಂತರಗೆಣ್ಣಿನ ಕೇಂದ್ರಭಾಗದಲ್ಲಿ ಯಾವುದೇ ರೀತಿಯ ಅಂಗಾಂಶವಿಲ್ಲ. ಇದರಿಂದ ಇದು ಟೊಳ್ಳಾಗಿದೆ. ಗೆಣ್ಣಿನಲ್ಲಿ ಮಾತ್ರ ಕೇಂದ್ರಭಾಗವೂ ಅಂಗಾಂಶದಿಂದ ಕೂಡಿಕೊಂಡು ಗಟ್ಟಿಯಾಗಿದೆ. ಎರಡೂ ಪ್ರದೇಶಗಳ ಹೊರವಲಯದಲ್ಲಿ ಜೈಲಮ್ ಮತ್ತು ಫ್ಲೋಯೆಮ್ ಅಂಗಾಂಶಗಳಿಂದ ರಚಿತವಾದ ನಾಳಕೂರ್ಚಗಳಿವೆ.

ಕ್ಯಾಲಮೈಟಿಸ್ ಸಸ್ಯದ ಬೇರುಗಳಿಗೆ ಆಸ್ಟಿರೊಮೈಲಾನ್ ಎಂದು ಹೆಸರು. ಇವೆಲ್ಲ ಆಗಂತುಕ ಬೇರುಗಳಾಗಿದ್ದು ಕಾಂಡದಂತೆ ಗೆಣ್ಣುಗಳನ್ನು ಪ್ರದರ್ಶಿಸುವುದಿಲ್ಲ.

ಕ್ಯಾಲಮೈಟಿಸ್ ಎಲೆಗಳಿಗೆ ಆನ್ಯುಲೇರಿಯ. ಆಸ್ಟಿರೊಫಿಲೈಟಿಸ್ ಎಂಬ ಹೆಸರುಗಳನ್ನು ಕೊಡಲಾಗಿದೆ. ಕಾಂಡದ ಒಂದೊಂದು ಗೆಣ್ಣಿನಲ್ಲಿಯೂ 8-32 ಎಲೆಗಳಿದ್ದು ಇವು ವರ್ತುಲ ಜೋಡಣೆಯನ್ನು ಪ್ರದರ್ಶಿಸುತ್ತವೆ. ಒಂದೊಂದು ಎಲೆಯೂ 5 ಮಿಮೀ.ನಿಂದ ಹಿಡಿದು ಹಲವು ಸೆಂಮೀ. ಉದ್ದದ ಕೊಳವೆಯಂತಿದೆ. ಒಳಗೆ ಕೇಂದ್ರ ಭಾಗದಲ್ಲಿ ಒಂದು ನಾಳಕೂರ್ಚವೈ ಅದರ ಸುತ್ತ ಕೆಲವು ಪದರದಲ್ಲಿ ಜೋಡಣೆಗೊಂಡ ಪರೆಂಕಿಮ ಜೀವಕೋಶಗಳೂ. ಇದನ್ನು ಸುತ್ತುವರಿದಂತೆ ಮೀಸೋಫಿಲ್ ಜೀವಕೋಶಗಳೂ ಇವೆ. ಇವೆಲ್ಲವನ್ನೂ ಸುತ್ತಿಕೊಂಡು ಎಪಿಡರ್ಮಿಸ್ ಪದರವಿದೆ.
ಸಂತಾನಾಭಿವೃದ್ಧಿಯ ಅಂಗಗಳಿಗೆ ಸ್ಟ್ರೊಬೈಲಿ ಅಥವಾ ಕೋನುಗಳೆಂದು (ಶಂಕು) ಹೆಸರು. ಕ್ಯಾಲಮೈಟಿಸ್ ಸಸ್ಯದವೆಂದು ಹೇಳಲಾಗುವ 2 ಬಗೆಯ ಕೋನುಗಳು ಸಿಕ್ಕಿವೆ: ಒಂದು ಪೇಲಿಯೊಸ್ಟೇಕಿಯ, ಇನ್ನೊಂದು ಕ್ಯಾಲಮಾಸ್ಟೇಕಿಸ್. ಕೋನುಗಳು ವಿಶಿಷ್ಟ ಬಗೆಯ ಫಲವಂತಿ ಕಾಂಡಗಳ ಮೇಲೆ ಹುಟ್ಟುತ್ತಿದ್ದವು. ಒಂದೊಂದು ಕೋನಿನಲ್ಲೂ ಗೆಣ್ಣುಗಳಾಗಿ ವಿಭಾಗಗೊಂಡ ಒಂದು ಕೇಂದ್ರೀಯ ಅಕ್ಷವಿದ್ದು ಇದರ ಗೆಣ್ಣುಗಳಲ್ಲಿ ವರ್ತುಲಾಕಾರವಾಗಿ ಜೋಡಣೆಗೊಂಡ 6-8 ಸ್ಪೊರ್ಯಾಂಜಿ ಯೊಫೋರ್‍ಗಳು ಇವೆ. ಇವಕ್ಕೆ ಪರ್ಯಾಯವಾಗಿ ಬರಡು ಉಪಪತ್ರಗಳೂ (ಸ್ಟರೈಲ್ ಬ್ರಾಕ್ಟ್ಸ್) ಇವೆ. ಒಂದೊಂದು ಸ್ಪೊರ್ಯಾಂಜಿಯೊಫೋರಿನಲ್ಲೂ ಕೋನಿನ ಕೇಂದ್ರ ಅಕ್ಷಕ್ಕೆ ಅಂಟಿಕೊಂಡಿರುವಂಥ ತೊಟ್ಟೂ ತುದಿಯಲ್ಲಿ ಒಂದು ತಟ್ಟೆಯೂ ಇವೆ. ತಟ್ಟೆಯ ತಳಭಾಗಕ್ಕೆ ಅಂಟಿಕೊಂಡಿದ್ದು ಕೋನಿನ ಅಕ್ಷದ ಕಡೆ ಮುಖಮಾಡಿರುವಂತೆ ಜೋಡಿತವಾದ 4 ಬೀಜಾಣುಕೋಶ (ಸ್ಪೊರ್ಯಾಂಜಿಯ) ಗಳು ಇವೆ. ಇದುವರೆಗೆ ಸಿಕ್ಕಿರುವ ಕ್ಯಾಲಮೈಟಿಸ್ಸಿನ ಕೋನ್ ಅವಶೇಷಗಳಲ್ಲಿ ಎರಡು ಬಗೆಯ ಬೀಜಾಣುಗಳು (ಸ್ಪೋರ್) ಇರುವುದು ಕಂಡುಬಂದಿದೆ. ಕೆಲವದರಲ್ಲಿ ಸ್ಪೋರುಗಳು ಸಮರೂಪದವಾಗಿದ್ದರೆ ಇನ್ನು ಕೆಲವದರಲ್ಲಿ ಅಸಮರೂಪದವಾಗಿವೆ. ಸಮರೂಪದ ಸ್ಥಿತಿಯನ್ನು ಹೋಮೋಸ್ಪೋರಸ್ ಎಂದೂ ಅಸಮರೂಪದ ಸ್ಥಿತಿಯನ್ನು ಹೆಟರೋಸ್ಪೋರಸ್ ಎಂದೂ ಕರೆಯಲಾಗುತ್ತದೆ. ಎರಡನೆಯ ಸ್ಥಿತಿಯಲ್ಲಿ ಕಾಣಬರುವ ದೊಡ್ಡಗಾತ್ರದ ಬೀಜಾಣುಗಳಿಗೆ ಮೆಗಾಸ್ಪೋರ್ ಎಂದೂ ಸಣ್ಣಗಾತ್ರದವಕ್ಕೆ ಮೈಕ್ರೊಸ್ಪೋರ್ ಎಂದೂ ಹೆಸರು.  (ಎಂ.ವಿ.ಎ.ಎಸ್.; ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ